‘ಚಂದ್ರಯಾನ–2ರ ಉಡಾಯನ ಕಾರ್ಯಾಚರಣೆಯು ಸೋಮವಾರ ಯಶಸ್ವಿಯಾಗಿ ನಡೆಯಲಿದೆ’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮುಖ್ಯಸ್ಥ ಕೆ.ಶಿವನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪೂರ್ವನಿಗದಿಯಂತೆ ಜುಲೈ 15ರ ರಾತ್ರಿ 2.51ಕ್ಕೆ ಚಂದ್ರಯಾನ–2ರ ನೌಕೆಗಳನ್ನು ಹೊತ್ತ ಜಿಎಸ್‌ಎಲ್‌ವಿ ಮಾರ್ಕ್–2 ರಾಕೆಟ್ ನಭಕ್ಕೆ ಜಿಗಿಯಬೇಕಿತ್ತು. ಆದರೆ ನಿಗದಿತ ಸಮಯಕ್ಕೆ 56 ನಿಮಿಷ 21 ಸೆಕೆಂಡ್ ಇರುವಾಗ ತಾಂತ್ರಿಕ ಸಮಸ್ಯೆಯ ಕಾರಣ ಕಾರ್ಯಾಚರಣೆಯನ್ನು ರದ್ದು ಮಾಡಲಾಗಿತ್ತು. ಆ ತಾಂತ್ರಿಕ ಸಮಸ್ಯೆಗಳನ್ನು ಈಗ ಸರಿಪಡಿಸಲಾಗಿದೆ ಎಂದು ಇಸ್ರೊ ಹೇಳಿದೆ.
ದಕ್ಷಿಣ ಧ್ರುವ ತಲುಪಲಿರುವ ನೌಕೆ
- ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನ ಕಾರ್ಯಾಚರಣೆ ನಡೆಯಲಿದೆ.
- ಸೋಮವಾರ ಮಧ್ಯಾಹ್ನ 2.43ರಲ್ಲಿ ಉಡ್ಡಯನ ನಡೆಯಲಿದೆ.
- ಭಾನುವಾರ ಸಂಜೆ 6.43ರಿಂದಲೇ ಉಡ್ಡಯನಕ್ಕೆ ಕ್ಷಣಗಣನೆ ಆರಂಭಿಸಲಾಗಿದೆ.
- ಚಂದ್ರಯಾನ–2 ‘ವಿಕ್ರಂ’ ಲ್ಯಾಂಡರ್ ನೌಕೆ ಮತ್ತು ‘ಪ್ರಜ್ಞಾನ್’ ರೋವರ್ ನೌಕೆಯನ್ನು ಒಳಗೊಂಡಿದೆ.
- ಚಂದ್ರಯಾನ–2 ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ.
- ಚಂದ್ರನ ದಕ್ಷಿಣ ಧ್ರುವದ ಬಹುತೇಕ ಭಾಗವು ಸದಾ ಕತ್ತಲಲ್ಲೇ ಇರುತ್ತದೆ. ಈವರೆಗೆ ಯಾವುದೇ ದೇಶದ ಸಂಶೋಧನಾ ನೌಕೆ ದಕ್ಷಿಣ ಧ್ರುವವನ್ನು ತಲುಪಿಲ್ಲ. ಆ ಸ್ಥಳವನ್ನು ತಲುಪಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ.
- ಚಂದ್ರನ ದಕ್ಷಿಣ ಧ್ರುವದಲ್ಲಿರುವ ಪಳೆಯುಳಿಕೆಗಳ ಅಧ್ಯಯನ ನಡೆಸಲಾಗುತ್ತದೆ. ನಮ್ಮ ಸೌರವ್ಯೂಹದ ಆರಂಭಿಕ ಹಂತದ ಸ್ಥಿತಿಗತಿಗಳು ಈ ಪಳೆಯುಳಿಕೆಗಳಲ್ಲಿ ದಾಖಲಾಗಿರುವ ಸಾಧ್ಯತೆ ಇದೆ. ಚಂದ್ರಯಾನ–2 ಹೊಸ ವೈಜ್ಞಾನಿಕ ಆವಿಷ್ಕಾರಗಳಿಗೆ ಕಾರಣವಾಗಲಿದೆ.

Very nice
ReplyDelete