ಸ್ಪರ್ಧಾ ಮನೆ

ನಮಸ್ಕಾರ ಗೆಳೆಯರೇ,
ಇಲ್ಲಿ ನೀವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು, ಉದ್ಯೋಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು, ಮತ್ತಿತರ ಉತ್ತಮವಾದಂತಹ ಮಾಹಿತಿಗಳನ್ನು ಕಾಣುವಿರಿ.

Saturday, 20 July 2019

ಓದುವುದು ಹೇಗೆ?

ಇಂದಿನ ದಿನಗಳಲ್ಲಿ ಶಿಕ್ಷಣ ಎನ್ನುವುದು ಪ್ರತಿ ಮಗುವಿಗೂ ಅಗತ್ಯವಾದದ್ದು. ಹಾಗೆ ಎಲ್ಲಾ ಮಕ್ಕಳು ಮೊದಲ ರ್ಯಾಂಕ್ ಪಡೆಯೋಕೆ ಸಾಧ್ಯವಿಲ್ಲ ಆದರೆ ಪ್ರತಿಯೊಂದು ಮಗು ಉತ್ತಮ ಅಂಕಗಳಿಸಿ ಉತ್ತಮ ಭವಿಷ್ಯವನ್ನು ಕಂಡುಕೊಳ್ಳಲು ಸಾಧ್ಯವಿದೆ. ಅಷ್ಟೇ ಅಲ್ಲ ಈಗೆಲ್ಲಾ ವಿದ್ಯಾರ್ಥಿಗಳು ಬಹಳ ಸುಲಭವಾಗಿ ಅಂಕಗಳನ್ನು ಪಡೆಯುತ್ತಾರೆ ಕಾರಣ ಎಲ್ಲಾ ವಿದ್ಯಾರ್ಥಿಗಳೂ ಬುದ್ಧಿವಂತರಾಗುತ್ತಿರುವುದು ಮತ್ತು ಅವರ ಕೌಶಲ್ಯ ಅಭಿವೃದ್ಧಿ ಹೊಂದುತ್ತಿರುವುದು.
ಇಂದಿನ ವರ್ಷದ ಬೋರ್ಡ್‌ ಪರೀಕ್ಷೆಯ ಫಲಿತಾಂಶವನ್ನು ನೋಡಿದಾಗ 100ಕ್ಕೆ 90%ರಷ್ಟು ಅಂಕಗಳನ್ನು ಪಡೆಯುವ ವಿದ್ಯಾರ್ಥಿಗಳನ್ನು ನಾವು ನೋಡಿದ್ದೇವೆ. ಅಂತಹ ಯಶಸ್ವಿ ವಿದ್ಯಾರ್ಥಿಗಳ ಯಶಸ್ಸಿನ ಗುಟ್ಟೇನು? ಅವರು ಹೇಗೆ ಅಧ್ಯಯನ ಮಾಡಿ ಪರೀಕ್ಷೆಯನ್ನು ಸುಲಭವಾಗಿಸಿಕೊಂಡರು ಎಂಬುದನ್ನು ಕರಿಯರ್ ಇಂಡಿಯಾ ನಿಮಗೆ ತಿಳಿಸುತ್ತಿದೆ.
* ಉತ್ತಮ ಅಂಕಗಳನ್ನು ಪಡೆಯಲು ಮೊದಲು ಕನಸುಗಳನ್ನು ಹೊಂದಿರಬೇಕು ಅದೇ ರೀತಿಯಾಗಿ ಅದಕ್ಕೆ ಬೇಕಾದ ಸಿದ್ಧತೆಗಳೊಂದಿಗೆ ಅಗತ್ಯ ವಸ್ತು ಮತ್ತು ಪುಸ್ತಕಗಳೊಂದಿಗೆ ಶಾಲೆಗೆ ಹೋಗುವುದನ್ನು ಪ್ರತಿನಿತ್ಯ ತಪ್ಪದೇ ಪಾಲಿಸುತ್ತಾರೆ.
* ತರಗತಿಯಲ್ಲಿ ಕೇವಲ ಪಾಠ ಕೇಳುವುದು ಮತ್ತು ನೋಟ್ಸ್ ಬರೆದುಕೊಳ್ಳುವುದು ಅಷ್ಟೇ ಅಲ್ಲದೇ ತುಂಬಾನೆ ಚುರುಕಾಗಿ ತರಗತಿಯಲ್ಲಿ ಇರುತ್ತಾರೆ. ಶಿಕ್ಷಕ / ಶಿಕ್ಷಕಿ ಕೇಳುವ ಪ್ರಶ್ನೆಗಳಿಗೆ ತಟ್ಟನೆ ಉತ್ತರ ನೀಡುತ್ತಾ, ತಮ್ಮಲ್ಲಿರುವ ಸಂಶಯಗಳ ಬಗೆಗೆ ಪ್ರಶ್ನಿಸುತ್ತಾ, ತರಗತಿಯಲ್ಲಿ ಮೆಚ್ಚುಗೆಗೆ ಪಾತ್ರರಾಗುತ್ತಾರೆ.
* ಎಲ್ಲಾ ವಿಷಯಗಳ ಅಧ್ಯಯನದಲ್ಲೂ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಸರಿ ತಪ್ಪು ಎಂದು ನೋಡದೆ ಪ್ರಯತ್ನ ಮೊದಲು ಎಂದು ಮೊದಲು ಭಾಗವಹಿಸುವಿಕೆಗೆ ಹೆಚ್ಚು ಮಹತ್ವ ಕೊಡುತ್ತಾರೆ.
* ತರಗತಿಯ ಪಠ್ಯ ಪುಸ್ತಕಗಳನ್ನು ಮಾತ್ರ ಅಭ್ಯಸಿಸದೆ ಇತರೆ ಮತ್ತಷ್ಟು ಪುಸ್ತಕಗಳನ್ನು ಕಲೆ ಹಾಕಿ ಅಧ್ಯಯನ ನಡೆಸುವುದನ್ನು ರೂಢಿಯಲ್ಲಿಟ್ಟುಕೊಳ್ಳುತ್ತಾರೆ. ಇದರಿಂದ ಹೆಚ್ಚಿನ ಜ್ಞಾನವನ್ನು ಪಡೆಯುತ್ತಾರೆ.
* ಓದು ಎಷ್ಟು ಮುಖ್ಯ ಮತ್ತು ಅಗತ್ಯವೋ ಅದೇ ರೀತಿ ಪ್ರತಿನಿತ್ಯ ನಿದ್ರೆಗೂ ಅಷ್ಟೇ ಮಹತ್ವವನ್ನು ಕೊಡುತ್ತಾರೆ. ವಿದ್ಯಾರ್ಥಿಗಳಿಗೆ ನಿದ್ರೆ ಮುಖ್ಯವಾದುದು. ರಾತ್ರಿ ಚೆನ್ನಾಗಿ ನಿದ್ದೆ ಮಾಡಿದರೆ ಮರುದಿನ ತರಗತಿಯಲ್ಲಿ ತುಂಬಾ ಸಕ್ರಿಯವಾಗಿರಲು ಸಾಧ್ಯ ಮತ್ತು ಉತ್ತಮ ನಿದ್ರೆಯಿಂದ ವಿದ್ಯಾರ್ಥಿಗಳಿಗೆ ನೆನಪಿನ ಶಕ್ತಿ ಹೆಚ್ಚಿರುತ್ತದೆ ಎನ್ನುವ ಮಾತಿದೆ.
* ಶಿಸ್ತು ಮತ್ತು ಭವಿಷ್ಯದ ಕನಸುಳ್ಳ ವಿದ್ಯಾರ್ಥಿಗಳು ಎಲ್ಲೆಂದೆರಲ್ಲಿ ಕುಳಿತು ಅಧ್ಯಯನ ಮಾಡುವುದಿಲ್ಲ. ಅವರ ಮನಸ್ಸಿಗೆ ಹಿತ ನೀಡುವ ಮತ್ತು ಓದಿಗೆ ಪೂರಕವಾಗುವ ವಾತಾವರಣದಲ್ಲಿ ಕುಳಿತು ಓದಲು ಬಯಸುತ್ತಾರೆ. ಇದರಿಂದ ಅವರ ಓದು ಇನ್ನಷ್ಟು ಅಭಿವೃದ್ಧಿಗೊಳ್ಳುವುದು.
* ಸದಾ ವಿದ್ಯಾರ್ಥಿಗಳು ಪುಸ್ತಕ ಹಿಡಿದು ಕುಳಿತರೆ ಬುದ್ಧಿ ಮಂಕಾಗುವ ಸಾಧ್ಯತೆ ಇರುತ್ತದೆ. ಓದಿನಲ್ಲಿ ಹೇಗೆ ಸಕ್ರಿಯವಾಗಿ ತೊಡಗುತ್ತಾರೋ ಅದೇ ರೀತಿಯಲ್ಲಿ ಶಾಲೆಗಳಲ್ಲಿ ನಡೆಯುವ ಇತರೆ ಪಠ್ಯೇತರ ಚಟುವಟಿಕೆಗಳಲ್ಲಿ ಹೆಚ್ಚು ಭಾಗವಹಿಸುತ್ತಾರೆ. ಇದರಿಂದ ಅವರ ಮನಸ್ಸಿಗೆ ರಿಲ್ಯಾಕ್ಸ್ ಆಗುವುದರ ಜೊತೆಗೆ ಸಂವಹನ ಕೌಶಲ್ಯಗಳು ಅಭಿವೃದ್ಧಿಗೊಳ್ಳುತ್ತವೆ.
* ಪಠ್ಯ ಪುಸ್ತಕಗಳ ಅಧ್ಯಯನವಲ್ಲದೇ ನಮಗೆ ಲಭ್ಯವಿರುವ ಟೆಕ್ನಾಲಜಿಯನ್ನು ಶಿಕ್ಷಣದಲ್ಲಿ ಹೇಗೆ ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು ಸಾಧ್ಯವೋ ಅಷ್ಟು ಉತ್ತಮ ರೀತಿಯಲ್ಲಿ ಅಧ್ಯಯನದಲ್ಲಿ ತೊಡಗಲು ಹೊಸ ತಂತ್ರಜ್ಞಾನಗಳ ಬಳಕೆಯನ್ನು ಮಾಡುವ ಮೂಲಕ ಹೆಚ್ಚು ಜ್ಞಾನವನ್ನು ಪಡೆಯುತ್ತಾರೆ.
* ಗುರಿ ಮತ್ತು ಜೀವನದಲ್ಲಿ ಆಶಯಗಳನ್ನೊಳಗೊಂಡ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಲ್ಲಿ ಯಾವುದೇ ರೀತಿಯ ಅಡ್ಡದಾರಿಗಳನ್ನು ಹಿಡಿಯುವುದಿಲ್ಲ. ಪರೀಕ್ಷಾ ಸಂದರ್ಭಗಳಲ್ಲಿ ಯಾವುದೇ ಶಾರ್ಟ್ ಕಟ್ ದಾರಿಗಳನ್ನು ಆಯ್ಕೆ ಮಾಡಿಕೊಳ್ಳುವಂತಹ ತಪ್ಪು ಹೆಜ್ಜೆಗಳನ್ನು ಇಡುವುದಿಲ್ಲ. ಬದಲಿಗೆ ಕಠಿಣ ಶ್ರಮದಿಂದ ಪರೀಕ್ಷೆಯನ್ನು ಎದುರಿಸಲು ಸಿದ್ಧರಾಗಿರುತ್ತಾರೆ.
* ಶೈಕ್ಷಣಿಕ ಹಂತದಲ್ಲಿ ಮಹತ್ತರವಾದ ವಿಚಾರ ಅಂದರೆ ಸಮಯ ನಿರ್ವಹಣೆ. ಪ್ರತಿನಿತ್ಯ ಅಧ್ಯಯನಕ್ಕೆ ಮೀಸಲಿಡುವ ಸಮಯದ ಬಗೆಗೆ ಹೆಜ್ಜು ಕಾಳಜಿ ವಹಿಸುತ್ತಾರೆ. ಅಂದಿನ ಪಠ್ಯವನ್ನು ಅಂದೇ ಕರಗತಗೊಳಿಸಿಕೊಳ್ಳಲು ನಿಗದಿತ ಸಮಯದಲ್ಲಿ ಅಭ್ಯಾಸವನ್ನು ಕೈಗೊಳ್ಳುವುದನ್ನು ರೂಢಿಯಲ್ಲಿರಿಸಿಕೊಳ್ಳುತ್ತಾರೆ.
ಇಷ್ಟೇ ಅಲ್ಲದೇ ಯಶಸ್ವೀ ವಿದ್ಯಾರ್ಥಿಗಳು ಶಿಸ್ತು ಬದ್ಧ ಜೀವನ ಕ್ರಮವನ್ನು ಅನುಸರಿಸುತ್ತಾರೆ. ಆರೋಗ್ಯವನ್ನು ಸದಾ ಕಾಪಾಡಲು ಉತ್ತಮ ಆಹಾರ ಸೇವನೆ ಮತ್ತು ದೈಹಿಕ ವ್ಯಾಯಾಮಗಳೊಂದಿಗೆ ಸಧೃಢವಾಗಿರಿಸಲು ಕಾಳಜಿ ವಹಿಸುತ್ತಾರೆ. ಇತರರೊಂದಿಗೆ ಓದಿನ ವಿಚಾರಗಳನ್ನು ಚರ್ಚಿಸುತ್ತಾ ಸದಾ ಹೊಸ ವಿಷಯಗಳ ಕಲಿಕೆಯೊಂದಿಗೆ ದಿನವನ್ನು ಕಳೆಯಲು ಉತ್ಸುಕರಾಗಿರುತ್ತಾರೆ. ಈ ಎಲ್ಲಾ ಅಂಶಗಳನ್ನು ನೀವೂ ಅರಿತು ನಿಮ್ಮ ಜೀವನದಲ್ಲಿ ರೂಢಿ ಮಾಡಿಕೊಂಡರೆ ಖಂಡಿತವಾಗಿಯೂ ನೀವೂ ಮುಂಬರಲಿರುವ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ ಯಶಸ್ವಿ ವಿದ್ಯಾರ್ಥಿಗಳಾಗುವುದರಲ್ಲಿ ಸಂಶಯವೇ ಇಲ್ಲ. ನೀವು ಕೂಡ ಯಶಸ್ವಿ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಸೇರುತ್ತೀರಿ ಎಂಬುದೇ ನಮ್ಮ ವಿಶ್ವಾಸ.

No comments:

Post a Comment